ತೆರೆನೊರೆ ಸವಾರಿ -
ತೆರೆನೊರೆಯ ಮೇಲೆ ಸವಾರಿ ಮಾಡುವ ಒಂದು ಆಟ (ಸರ್ಫ್ ರೈಡಿಂಗ್). ಈ ಆಟದಲ್ಲಿ ಒಬ್ಬ ಮನುಷ್ಯ ಉದ್ದವಾದ, ಕಡಿಮೆ ಅಗಲವುಳ್ಳ ಹಲಗೆಯ ಮೇಲೆ ನಿಂತು ದಡಕ್ಕೆ ಬಡಿಯುವ ಹೊರಳು ತೆರೆಯ ಆಸರೆಯನ್ನು ಪಡೆದು ತೀರಕ್ಕೆ ಅಭಿಮುಖವಾಗಿ ಸವಾರಿ ಮಾಡುತ್ತಾನೆ. ಇಲ್ಲಿ ತೆರೆನೊರೆಯೆಂದರೆ ಸಮುದ್ರದ ತೀರದ ಮೇಲೆ ಅಥವಾ ಬಂಡೆಗಳ ಮೇಲೆ ಅಲೆಗಳು ಬಡಿದು ಏಳುವ ನೊರೆ ಇಲ್ಲವೇ ಕಲಕ (ಸರ್ಫ್). ಹವಾಯಿ ದ್ವೀಪದಲ್ಲಿ ಹುಟ್ಟಿ ಬೇರೆಡೆಗಳಿಗೆ ಹರಡಿದ ಈ ಆಟವನ್ನು ಇಂದು ಪ್ರಪಂಚದ ಆದ್ಯಂತ ಸಮುದ್ರದ ಅಂಚು ಪ್ರದೇಶಗಳಲ್ಲಿ ಹೆಚ್ಚಾಗಿ ಆಡುತ್ತಾರೆ.

ಐರೋಪ್ಯ ಅನ್ವೇಷಕರು ಫೆಸಿಫಿಕ್ ಮಹಾಸಾಗರ ಪ್ರದೇಶಗಳಲ್ಲಿ ಮೊದಲ ಬಾರಿ ಭೇಟಿಕೊಟ್ಟ ಸಮಯದಲ್ಲಿ ಈ ಆಟವನ್ನು ಪಾಲಿನೇಷ್ಯನ್ ದ್ವೀಪವಾಸಿಗಳು ಆಡುತ್ತಿದ್ದರು. 1778ರ ವೇಳೆಗೆ ಹವಾಯಿ ದ್ವೀಪವನ್ನು ತಲುಪಿದ್ದ ಕ್ಯಾಪ್ಟನ್ ಜೇಮ್ಸ್ ಕುರ್ ತಾನು ಅಲ್ಲಿಕಂಡ ಈ ಆಟದ ಬಗ್ಗೆ ದೀರ್ಘವಾದ ವಿವರಗಳನ್ನು ನೀಡಿದ್ದಾನೆ. ಕೆಲವು ಕಾಲದ ವರೆಗೆ ಫೆಸಿಫಿಕ್ ದ್ವೀಪ ನಿವಾಸಿಗಳಿಗೆ ಈ ಆಟ ಹೊರಗಿನಿಂದ ತಂದು ರೂಢಿಸಿದ್ದೆಂಬ ಕಾರಣದಿಂದ ಬಹಳ ಜನಪ್ರಿಯವಾಗಿತ್ತು. ಈ ಪ್ರದೇಶಕ್ಕೆ ಹೊರಗಿನಿಂದ ಬಂದ ಸಾಹಸಪ್ರಿಯರಾದ ಯಾತ್ರಿಕರಿಗೆ, ಆಸ್ಟ್ರೇಲಿಯ ಮತ್ತು ದಕ್ಷಿಣ ಕ್ಯಾಲಿಫೋರ್ನಿಯದ ಪ್ರವಾಸಿಗಳಿಗೆ ಇಲ್ಲಿಯ ಜನರು ಈ ಆಟವನ್ನು ಆಡಿ ತೋರಿಸುತ್ತಿದ್ದರು. 1915ರ ವೇಳೆಗೆ ಹವಾಯಿಯ ಡ್ಯೂಕ್ ಕಹಾನಾನೊಕು ಎಂಬಾತನಿಂದ ಈ ಆಟ ಆಸ್ಟ್ರೇಲಿಯಕ್ಕೂ ಅಲ್ಲಿಂದ ಅಮೆರಿಕ ಮತ್ತು ಯೂರೋಪುಗಳಿಗೂ ಪ್ರವೇಶಿಸಿತು. ಆಟಕ್ಕೆ ಅನುಕೂಲವಾದ ಅಲೆಯ ಓಟ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಇಂದು ಆಟ ಜನಪ್ರಿಯವಾಗಿದೆ. ಎರಡನೆಯ ಮಹಾಯುದ್ಧದ ಅನಂತರ ಬೆಳವಣಿಗೆಗೊಂಡ ಅನೇಕ ವಿಧದ ನೀರಾಟಗಳ ಪೈಕಿ ಇದು ಸಹ ಒಂದು. ಈಚೆಗೆ ಸುಲಭವಾಗಿ ಬಳಸಬಹುದಾದ ಹಗುರವಾದ ತೆರೆನೊರೆ ಹಲಗೆಗಳು ಬಳಕೆಗೆ ಬಂದ ಮೇಲಂತೂ ಇದು ಇನ್ನೂ ಹೆಚ್ಚಾಗಿ ಜನರ ಮೆಚ್ಚುಗೆಯನ್ನು ಪಡೆಯತೊಡಗಿತು. ಈ ಆಟದಲ್ಲಿ ಹಲಗೆಯಂತೆ ತೆರೆನೊರೆ ಹಾವುಗೆ (ಸರ್ಫ್‍ಸ್ಕೀ) ಇಮ್ಮಡಿ ಹಾವುಗೆ (ಡಬಲ್ ಸ್ಕೀ) ತೆರೆನೊರೆ ದೋಣಿಗಳನ್ನು (ಸರ್ಫ್ ಬೋಟ್) ಸಹ ಬಳಸುವುದುಂಟು.

ಸಮುದ್ರದ ತೀರ ನಿಧಾನವಾಗಿ ಇಳಿಜಾರಾಗುತ್ತಿದ್ದು ಒಳಮುಖವಾಗಿ ಸಾಗುತ್ತಿದ್ದರೆ ತೆರೆನೊರೆ ಸವಾರಿಗೆ ಉತ್ತಮವಾದ ಪರಿಸರ ಒದಗಿದಂತಾಗುತ್ತದೆ. ಈ ಇಳಿಜಾರಿನಲ್ಲಿ ಸುಮಾರು 90 ರಿಂದ 900 ಮೀಟರುಗಳ ವರೆಗಿನ ಪ್ರದೇಶ ಸವಾರಿಗೆ ಯೋಗ್ಯವಾಗಿದ್ದು ಇಲ್ಲಿ ನೀರಿನ ಆಳ ಹತ್ತು ಅಡಿಗಳಿಗಿಂತ ಹೆಚ್ಚಾಗಿರಬಾರದು. ಸಾಧಾರಣವಾಗಿ ವಿನೋದಕ್ಕಾಗಿ ಅಥವಾ ಸ್ಪರ್ಧೆಗಾಗಿ ನಡೆಯುವ ಈ ಆಟದಲ್ಲ್ಲಿ ಹಗುರವಾದ ಒಂದು ಟೊಳ್ಳು ಹಲಗೆ ಇಲ್ಲವೇ ನೊರೆತುಂಬಿದ ನಾರುಗಾಜಿನಿಂದ ಮಾಡಿದ ಸುಮಾರು 60 ಸೆಂಮೀ. ಉದ್ದದ 11.5 ಕಿಗ್ರಾಂ ಭಾರದ ಚೂಪಾದ ಹಲಗೆಯನ್ನು ಬಳಸುತ್ತಾರೆ. ಹಲಗೆಯ ತುದಿಗಳನ್ನು ದುಂಡಗೆ ಮಾಡಿರುತ್ತಾರಲ್ಲದೇ ಸಮತೋಲನವನ್ನು ಕಾಪಾಡಲು ಆದರೆ ಹಿಂದಿನ ಬುಡದಲ್ಲಿ ಒಂದು ವಿಧದ ರೆಕ್ಕೆಗಳನ್ನು ಜೋಡಿಸಿರುತ್ತಾರೆ. ಈ ರೀತಿಯ ಹಲಗೆಯ ಮೇಲೆ ನಿಂತು ಜನ ಸವಾರಿ ಆಟವಾಡುತ್ತಾರೆ. ಅಲ್ಲದೇ 1ರಿಂದ 1.5 ಮೀ. ಉದ್ದದ ಹಲಗೆಯನ್ನು ಬಳಸಿ ಗಾಳಿ ಮೆತ್ತೆಯ ಮೇಲೆ ಮುಖವಡಿಯಾಗಿ ಉದ್ದಕ್ಕೆ ಮಲಗಿದ ಭಂಗಿಯಲ್ಲಿಯೂ (ಬಾಡಿ ಸರ್ಫಿಂಗ್) ಈ ಆಟವನ್ನು ಆಡುವುದುಂಟು.

ಸವಾರಿ ಮಾಡುವಾತ ಹಲಗೆಯ ಮೇಲೆ ನಿಂತು ಒಂದು ರೀತಿಯಲ್ಲಿ ಈಜುತ್ತ ಇಲ್ಲವೇ ಹುಟ್ಟುಹಾಕುತ್ತ ದಡದಿಂದ ಮುಂದೆ ಹೋಗಿ ಸಮುದ್ರದ ಹೊರಳು ತೆರೆಗಳು ಮೇಲೇಳುವ, ಆದರೆ ಇನ್ನೂ ನೆತ್ತಿಯಲ್ಲಿ ಒಡೆಯದ ಸಂದರ್ಭಗಳನ್ನು ನೋಡಿ ಅವುಗಳ ಬಳಿ ಸಾರುತ್ತಾನೆ. ಅನುಕೂಲಕರವಾದ ಅಲೆಯೊಂದು ಸಮೀಪಿಸಿದಾಗ ಆತ ತನ್ನ ಹಲಗೆಯ ಮೇಲೆ ಮುಖವಾಡಿಯಾಗಿ ಉದ್ದಕ್ಕೆ ಮಲಗಿ ವೇಗವನ್ನು ಪಡೆಯಲು ದಡದೆಡೆಗೆ ಈಜುತ್ತಾನೆ. ಈ ರೀತಿಯಾಗಿ ಅಲೆ ತನ್ನ ಬಳಿ ತಲುಪಿದಾಗ ಅದು ಒಡೆಯುತ್ತಿದ್ದಂತೆಯೇ ಆತ ಅದರ ಮುಮ್ಮುಖವನ್ನು ಸ್ಪರ್ಶಿಸುತ್ತ ಸರಿಯತೊಡಗಿ ದಡದೆಡೆಗೆ ಸಾಗುತ್ತಾನೆ. ನೆತ್ತಿಯೊಡೆಯುತ್ತಿರುವ ಅಲೆಗೆ ಆದಷ್ಟು ಹತ್ತಿರದಲ್ಲಿದ್ದು ಅದು ತನಗೆ ಹೊಡೆಯದ ಹಾಗೆ ನೋಡಿಕೊಳ್ಳುವುದು ಅವನ ಉದ್ದೇಶ. ಒಂದು ಬಾರಿ ಅಲೆ ಸಿಕ್ಕಿತೆಂದರೆ ಆತ ನಿಲುವಿನ ಸ್ಥಿತಿಗೆ ಬರಬಹುದು ಹಾಗೂ ಅಲೆ ದಡದತ್ತ ಧಾವಿಸಿ ಕ್ಷೀಣಿಸುವ ವರೆಗೂ ಸವಾರಿ ಮಾಡಬಹುದು. ಸಾಧಾರಣವಾಗಿ ಹಲಗೆಯ ಮಧ್ಯಭಾಗಕ್ಕೆ ಮುಂಗಾಲನ್ನು ಭದ್ರವಾಗಿ ಊರಿ ಹಿಂಗಾಲಿನ ಒತ್ತಡದಿಂದ ಬಲಕ್ಕೆ ಅಥವಾ ಎಡಕ್ಕೆ ತಿರುಗುವುದು ವಾಡಿಕೆ. ಅಲೆ ತೀರದೆಡೆಗೆ ಸಾಗುತ್ತಿದ್ದಂತೆ ಅದಕ್ಕೆ ಕರ್ಣಾಭಿಮುಖವಾಗಿ ಸಾಗಿ ನುರಿತ ಸವಾರಿಗರು ವೇಗವನ್ನೂ ಸಾಗಿನ ದೂರವನ್ನೂ ಹೆಚ್ಚಿಸಿಕೊಳ್ಳಬಹುದು. 0.6 ರಿಂದ 6 ಕಿ.ಮೀ. ವರೆಗೆ ಒಡೆಯುವ ಅಲೆಗಳಿಂದ ಸುಮಾರು 900 ಮೀ. ದೂರದ ವರೆಗೆ ಸಾಗಬಹುದು. ಗಾಳಿಮರೆಯಿರುವ ತೀರಪ್ರದೇಶ ಅಥವಾ ಕರೆಯ ರಕ್ಷಣೆಗಾಗಿ ಸಮುದ್ರದೊಳಗೆ ಚಾಚಿಕೊಂಡು ಹೋಗಿರುವ ಒಡ್ಡು ಇರುವ ಪ್ರದೇಶಗಳಲ್ಲಿ ತೆರೆನೊರೆ ಸವಾರಿಗೆ ಅನುಕೂಲವಾದ ಅಲೆಪರಿಸ್ಥಿತಿಗಳಿರುತ್ತವೆ. ಮುಖಾಹಾ, ಹವಾಯ್ ಮುಂತಾದ ಅತ್ಯುತ್ತಮ ಸವಾರಿ ಪ್ರದೇಶಗಳಲ್ಲಿ 4 ಮೀ. ಅಲೆಯ ಸಹಾಯದಿಂದ ಅರ್ಧ ಮೈಲಿಗಿಂತಲೂ ಹೆಚ್ಚು ದೂರ ಸವಾರಿ ಮಾಡಬಹುದು.

ಲಘುವಾದ ಸವಾರಿ ಮಾಡಬೇಕಾದರೆ 120-180 ಸೆಂಮೀ. ಉದ್ದದ ಮತ್ತು 30 ಸೆಂ,ಮೀ. ಅಗಲದ ಚಪ್ಪಟೆ ಹಲಗೆಯನ್ನು ಬಳಸಬಹುದು. ಆದರೆ 60 ಸೆಂ. ಮೀ. ಗಿಂತಲೂ ಎತ್ತರವಾದ ಅಲೆಗಳ ಮೇಲೆ ಸವಾರಿ ಮಾಡಬೇಕಾದಲ್ಲಿ 300-370 ಸೆಂಮೀ. ಉದ್ದದ 60 ಸೆಂಮೀ. ಅಗಲದ, ಹಿಂಬದಿಯಲ್ಲಿ ಸಮತೋಲಕ ರೆಕ್ಕೆಗಳುಳ್ಳ ಮೊನಚು ತುದಿಯ ಟೊಳ್ಳಾದ ತೆರೆನೊರೆ ಹಲಗೆಯನ್ನು ಬಳಸಬೇಕು. ಉತ್ತರ ಅಮೆರಿಕದ ತೀರಪ್ರದೇಶಗಳಲ್ಲಿ ಹಾಗೂ ಪೆರು ಹವಾಯ್ ಮತ್ತು ಪೂರ್ವ ಆಸ್ಟ್ರೇಲಿಯಾಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತೆರೆನೊರೆ ಸವಾರಿಗಳನ್ನು ಏರ್ಪಡಿಸುವರು. ಅಲೆಗಳ ಮೇಲೆ ಸಾಗುವುದು, ಸಾಗಿದ ಉದ್ದ, ಅಲೆಯನ್ನು ಹಿಡಿಯುವುದು, ಆಯ್ಕೆ ಮಾಡಿದ ಅಲೆ ಎಷ್ಟು ಕಷ್ಟಕರವಾದುದು. ಬಳಸಿದ ತಂತ್ರಕೌಶಲ ಎಂಥದು ಮುಂತಾದ ಅಂಶಗಳಿಗೆ ಅಂಕಗಳನ್ನು ನೀಡಿ ವಿಜೇತರನ್ನು ಆಯ್ಕೆ ಮಾಡುವರು. ಈ ಸ್ಪರ್ಧೆಗಳನ್ನು ಸ್ತ್ರೀಪುರುಷರಿಗೆ ಬೇರೆಬೇರೆಯಾಗಿಯೂ ಒಂದೇ ಹಲಗೆಯ ಮೇಲೆ ಇಬ್ಬಿಬ್ಬರನ್ನು ನಿಲ್ಲಿಸಿಯೂ ನಡೆಸುವರು.

ಒಳನಾಡಿನಲ್ಲಿರುವ ಸರೋವರ ಮತ್ತು ನದಿಗಳಲ್ಲಿ ಲಘುವಾಗಿ ಸವಾರಿ ಮಾಡಬೇಕಾದರೆ ಗಂಟೆಗೆ 14-20 ಕಿಮೀ. ಗಳ ವೇಗದಲ್ಲಿ ಭಾರವಾದ ಹೊರ ಹಲಗೆಯ ಮತ್ತು ಒಳ ಹಲಗೆಯ ಮೋಟಾರು ಬೋಟುಗಳನ್ನು ಬಳಸಿ ಅಲೆಗಳನ್ನು ಉಂಟುಮಾಡುವರು. ಈ ರೀತಿಯಾಗಿ ಮೋಟಾರು ಬೋಟಿನ ಜಾಡಿನಲ್ಲಿ ಸವಾರಿಮಾಡಬೇಕಾದರೆ ಸುಮಾರು 2.5 ಮೀ. ಉದ್ದದ ಹಲಗೆಗಳನ್ನು ಬಳಸುವರು. ಸರೋವರ ಮತ್ತು ನದಿಗಳಲ್ಲಿ ಸವಾರಿ ಮಾಡಲು ಅಲೆಗಳನ್ನೆಬ್ಬಿಸುವ ಯಂತ್ರಗಳನ್ನೂ ಈಚೆಗೆ ಅಭಿವೃದ್ಧಿಪಡಿಸಿದ್ದಾರೆ.

ಒಳನಾಡು ತೆರೆನೊರೆ ಸವಾರಿ, ಪ್ಲಾಸ್ಟಿಕ್ ಫೋಮಿನ ಬಳಕೆ, ಸುಲಭ ಬೆಲೆಗೆ ದೊರಕುವ ನಾರುಗಾಜು ಸವರಿದ ಹಲಗೆಗಳು, ಪತ್ರಿಕಾ ಪ್ರಚಾರ, ಚಲನಚಿತ್ರ ಮಾಧ್ಯಮ ಇವೆಲ್ಲವೂ ನೀಡಿರುವ ಪ್ರಚಾರ ಪ್ರೋತ್ಸಾಹಗಳಿಂದ ಈ ಆಟ ಈ ಶತಮಾನದ ಮಧ್ಯಭಾಗದಿಂದೀಚೆಗೆ ಬಹಳ ಜನಪ್ರಿಯವಾಗುತ್ತಿದೆ.		  				 (ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ